ಇತಿಹಾಸ

ಉಡುಪಿ ಹೆಸರನ್ನು ತುಳು ಹೆಸರು "ಒಡಿಪು" ಇಂದ ಪಡೆಯಲಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ. ತುಳು ಹೆಸರು ಮಲ್ಪೆಯಲ್ಲಿರುವ ವಡಭಾಂಡೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದೆ. ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ "ಉಡು" ಹಾಗೂ "ಪ" ಅಂದರೆ ನಕ್ಷತ್ರ ಹಾಗೂ ದೇವರು ಈ ಪದಗಳಿಂದ " ಉಡುಪಿ" ಎಂಬ ಪದವು ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕಥೆಗಳಲ್ಲಿ ವ್ಯಾಖ್ಯಾನಿಸಲಾಗಿದೆ. ದಂತಕಥೆಗಳ ಪ್ರಕಾರ ಒಮ್ಮೆ ಚಂದ್ರನು ರಾಜ ದಕ್ಷನ 27 ಹೆಣ್ಣು ಮಕ್ಕಳನ್ನು (ಹಿಂದೂ ಜ್ಯೋತಿಷ್ಯ ಪ್ರಕಾರ 27 ನಕ್ಷತ್ರಗಳು) ಮದುವೆಯಾದಾಗ ಚಂದ್ರನ ಬೆಳಕು ಒಮ್ಮೆ ರಾಜ ದಕ್ಷನ ಶಾಪದಿಂದ ಕಡಿಮೆಯಾಯಿತು. ಚಂದ್ರನು ತನ್ನ ಮೂಲ ಹೊಳಪನ್ನು ಹಿಂತಿರುಗಿಸಲು ಶಿವನನ್ನು ಪ್ರಾರ್ಥಿಸಿದನು. ಶಿವನು ಈತನ ಭಕ್ತಿಗೆ ಮೆಚ್ಚಿ ಬೆಳಕು ಪುನರ್‌ ಮರುಕಳಿಸುವಂತೆ ಮಾಡಿದನು. ಚಂದ್ರ ಹಾಗೂ ಆತನ ಪತ್ನಿಯಂದಿರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದರಿಂದ ಅಲ್ಲಿ ಲಿಂಗವೊಂದು ಉದ್ಭವವಾಗಿದ್ದು ಅದು ಇವತ್ತಿಗೂ ಕಾಣಲು ಸಿಗುತ್ತದೆ. ಆದ್ದರಿಂದ ದಂತಕಥೆಗಳ ಪ್ರಕಾರ ಉಡುಪಿಯು " ನಕ್ಷತ್ರಗಳ ದೇವರು -ಚಂದ್ರನ ನಾಡು" ಎಂದೂ ಸಹ ಪ್ರಸಿದ್ಧಿಯನ್ನು ಪಡೆದಿದೆ.

ಉಡುಪಿಯು 2011ರ ಜನಗಣತಿಯಂತೆ 11,77,908 ಜನಸಂಖ್ಯೆಯನ್ನು ಹೊಂದಿದ್ದು ಅದರಲ್ಲಿ ಮಹಿಳಾ ಸಂಖ್ಯೆಯ 51% ಇದ್ದು ಪುರುಷರ ಸಂಖ್ಯೆಯು 49% ಇದೆ. ಸರಾಸರಿ ಸಾಕ್ಷರತಾ ಪ್ರಮಾಣ 83% ಇದ್ದು, ಇದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತಾ ಪ್ರಮಾಣ 86% ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ 81% ಇದೆ. ಜನಸಂಖ್ಯೆಯಲ್ಲಿ 8% ಆರು ವರ್ಷದ ಒಳಗಿನವರಾಗಿರುತ್ತಾರೆ.

ಉಡುಪಿಯು ಟೌನ್ ಮುನಿಸಿಪಲ್ ಕೌನ್ಸಿಲ್ ಹೊಂದಿದ್ದು ಈಗ ನಗರ ಮುನಿಸಿಪಲ್ ಕೌನ್ಸಿಲ್( ನಗರ ಸಭೆ) ಯಾಗಿ 1995 ರಲ್ಲಿ ಅಸ್ಥಿತ್ವಕ್ಕೆ ಬಂದಿತು. ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಮಲ್ಪೆ ,ಮಣಿಪಾಲ, ಸಂತೆಕಟ್ಟೆ ಪ್ರದೇಶಗಳನ್ನು ನಗರ ಸಭೆ ರೂಪಿಸಲು ವಿಲೀನಗೊಳಿಸಲಾಯಿತು

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ಉಡುಪಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟ್ಟಣ ಯೋಜನೆ ಮತ್ತು ಇತರ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ಮುಖ್ಯ ಕಛೇರಿಯಾಗಿರುತ್ತದೆ .

ಉಡುಪಿಯನ್ನು ಅಗಸ್ಟ್ 25, 1997 ರಂದು ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಉಡುಪಿ, ಕುಂದಾಪುರ ಮತ್ತು ಕಾರ್ಕಳವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಂಗಡಿಸಿ ಉಡುಪಿ ಜಿಲ್ಲೆಯನ್ನು ರಚಿಸಲಾಯಿತು.